ಕನ್ನಡ ಕಾಯಕ ವರ್ಷಕ್ಕೆ ಕನ್ನಡ ಕವಾಯತು: ಟಿ.ಎಸ್.ನಾಗಾಭರಣ

varthajala
0

ಬೆಂಗಳೂರು,  ಜುಲೈ 16 (ಕರ್ನಾಟಕ ವಾರ್ತೆ): ರಾಜ್ಯದ ಗೃಹ ಇಲಾಖೆಯಲ್ಲಿ ಕನ್ನಡವನ್ನು ಎಲ್ಲಾ ಹಂತಗಳಲ್ಲೂ ಜಾರಿಗೊಳಿಸುವ ನಿಟ್ಟಿನಲ್ಲಿ ಕನ್ನಡ ಕವಾಯತು ಮಾದರಿಯಾಗುವಂತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ “ಕನ್ನಡ ಕವಾಯತು” ಅನುಷ್ಠಾನಕ್ಕೆ ತರಲು ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿ ಸುತ್ತೋಲೆಗಳನ್ನು ಹೊರಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ಮತ್ತು ಗೃಹ ಇಲಾಖಾ ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳು ನವೆಂಬರ್ 1, 2020 ರಿಂದ ಅಕ್ಟೋಬರ್ 31, 2021 ರವರೆಗೆ ‘ಕನ್ನಡ ಕಾಯಕ ವರ್ಷಾಚರಣೆ’ ಎಂದು ಘೋಷಿಸಿದ್ದು, ಮುಂಬರುವ ನವೆಂಬರ್ 1 ರಂದು ಮತ್ತು ಅಕ್ಟೋಬರ್ 31, 2021 ರಂದು ನಡೆಯಲಿರುವ ಕನ್ನಡ ಕಾಯಕ ವರ್ಷದ ಸಮಾರೋಪದಲ್ಲಿ ಕನ್ನಡದಲ್ಲಿ ಕವಾಯತನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಕವಾಯತು ನಡೆಸುವ ಸಂಬಂಧ ತರಬೇತಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡುವಂತೆ ಆಗ್ರಹಿಸಿದ್ದಾರೆ.
     ಬೆಳಗಾವಿ ಜಿಲ್ಲೆಯಲ್ಲಿ ಕನ್ನಡದಲ್ಲಿ ಭಾಷಾಂತರಿಸಿ ರೂಪಿಸಿರುವ ಕವಾಯತಿನ ಆದೇಶಗಳು ಎಲ್ಲಾ ರೀತಿಯಲ್ಲೂ ಕವಾಯತನ್ನು ನಿರ್ವಹಿಸಲು ಸಮರ್ಥವಾಗಿದ್ದು, ಪ್ರಾಯೋಗಿಕವಾಗಿಯೂ ಯಶಸ್ವಿಯಾಗಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ಅಂದಿನ ಗೃಹ ಸಚಿವರಿಗೂ ಕೋರಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
     ರಾಜ್ಯ ಸರ್ಕಾರದ ಆಡಳಿತ, ಶಿಕ್ಷಣ, ತಂತ್ರಜ್ಞಾನ ಮತ್ತು ಇತರ ಎಲ್ಲಾ ವಲಯಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಹಲವು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಗೃಹ ಇಲಾಖೆಯ ಆಡಳಿತದಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಕುರಿತಂತೆ ಬೆಳಗಾವಿ ಜಿಲ್ಲೆಯಲ್ಲಿ “ಕನ್ನಡ ಕವಾಯತು” ಜಾರಿಗೊಳಿಸಿರುವುದು ಪ್ರಶಂಸನೀಯವಾದುದು ಎಂದು ಅಧ್ಯಕ್ಷರು ಹೇಳಿದ್ದಾರೆ. ಕನ್ನಡ ಕಾಯಕ ವರ್ಷಕ್ಕೆ ಕರ್ನಾಟಕದ್ಯಾದ್ಯಂತ  ಕನ್ನಡ ಕವಾಯತು ಹಮ್ಮಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
Tags

Post a Comment

0Comments

Post a Comment (0)