* ಕೋವಿಡ್ ಹಿನ್ನೆಲೆಯಲ್ಲಿ ರದ್ದಾದ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ
* ಜುಲೈ 31 ರಂದು ಹೊರಬೀಳಲಿದೆ ಫಲಿತಾಂಶ
* 10, 11ನೇ ತರಗತಿ ಅಂಕ ಆಧರಿಸಿ ಸಿಬಿಎಸ್‌ಇ 12ನೇ ಕ್ಲಾಸ್ ಫಲಿತಾಂಶ
ನವದೆಹಲಿ(ಜೂ.17: ಕೋವಿಡ್ ಹಿನ್ನೆಲೆಯಲ್ಲಿ ರದ್ದಾದ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ಫಲಿತಾಂಶ ಜುಲೈ 31 ರಂದು ಹೊರ ಬೀಳಲಿದೆ. 10 ಹಾಗೂ 11ನೇ ತರಗತಿಯ ಫೈನಲ್ ರಿಸಲ್ಟ್ ಹಾಗೂ 12ನೇ ತರಗತಿಯ ಪ್ರೀ ಬೋರ್ಡ್ ಎಕ್ಸಾಂ ಅಂಕಗಳನ್ನಾಧರಿಸಿ ಹನ್ನೆರಡನೇ ತರಗತಿಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಇನ್ನು ಪ್ರತ್ಯೇಕವಾಗಿ ಪರೀಕ್ಷೆ ಬರೆಯಲಿಚ್ಛಿಸುವ ವಿದ್ಯಾರ್ಥಿಗಳಿಗೆ, ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ.
12ನೇ ತರಗತಿ ಫಲಿತಾಂಶ ಪ್ರಕಟ ಉದ್ದೇಶದಿಂದ ವಸ್ತುನಿಷ್ಠ ಮಾನದಂಡ ಸಿದ್ಧಪಡಿಸಲು ಸಿಬಿಎಸ್‌ಇ ರಚಿಸಿದ 13 ಸದಸ್ಯರ ಸಮಿತಿ ಸುಪ್ರೀಂ ಕೋರ್ಟ್ ಎದುರು ತಮ್ಮ ವರದಿ ಇಟ್ಟಿದೆ. ಇದರ ಅನ್ವಯ 10 ಮತ್ತು 11ನೇ ತರಗತಿ ಅಂತಿಮ ಪರೀಕ್ಷೆ ಅಂಕ ಮತ್ತು 12ನೇ ತರಗತಿಯಲ್ಲಿ ಈಗಾಗಲೇ ನಡೆಸಿರುವ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕ ಆಧರಿಸಿ 30:30:40 ಅನುಪಾತ ಆಧರಿಸಿ ಫಲಿತಾಂಶ ಪ್ರಕಟಿಸಲು ಶಿಫಾರಸು ಮಾಡಲಾಗಿದೆ. ಇದರ ಅನ್ವಯವೇ ಮುಂದಿನ ತಿಂಗಳು ಅಂದರೆ ಜುಲೈ 31ರಂದು ಫಲಿತಾಂಶ ಪ್ರಕಟವಾಗಲಿದೆ.
ಮೋದಿ ನೇತೃತ್ವದ ಸಭೆಯಲ್ಲಿ ಪರೀಕ್ಷೆ ರದ್ದು
ಜೂ.1ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ರದ್ದು ಮಾಡಲಾಗಿತ್ತು. ಇದರ ಬೆನ್ನಲ್ಲೇ ಐಸಿಎಸ್‌ಇ ಪರೀಕ್ಷೆ ರದ್ದು ಮಾಡಲಾಗಿತ್ತು.