ಶಾಲೆಯ ಎಲ್ಲಾ ಸಿಬ್ಬಂದಿಗಳನ್ನು ಕೋವಿಡ್ ವಾರಿರ‍್ಸ್ ಎಂದು ಪರಿಗಣಿಸಿ: ಸಭಾಪತಿ ಬಸವರಾಜ ಹೊರಟ್ಟಿ

varthajala
0

ಬೆಂಗಳೂರು, ಜೂನ್ ೧೭, (ಕರ್ನಾಟಕ ವಾರ್ತೆ) : ಕೋವಿಡ್-೧೯ ವಾರಿರ‍್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ನೌಕರರು ಕೋವಿಡ್ ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಹಲವು ಸಮಸ್ಯೆಗಳಿಗೆ ಒಳಗಾಗಿದ್ದು, ಹಲವು ಮಕ್ಕಳು ಅನಾಥರಾದ ಘಟನೆಗಳು ತಮ್ಮ ಗಮನಕ್ಕೆ ಸಹ ಬಂದಿದ್ದು, ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಕೆಲವು ಸಮಸ್ಯೆಗಳ ಕುರಿತು ಇಂದು ವಿಧಾನಸೌಧದಲ್ಲಿ ಸಭಾಪತಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಅವರು, ಅನುದಾನಿತ ಶಿಕ್ಷಣ ಕ್ಷೇತ್ರದಲ್ಲಿನ ಯಾವುದೇ ನೌಕರರು ಕೋವಿಡ್-೧೯ ನಿಂದ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದು ಅಥವಾ ವೆಚ್ಚ ಮರುಪಾವತಿಸುವ ಸೌಲಭ್ಯ ಒದಗಿಸುವುದರ ಕುರಿತು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಸರ್ಕಾರದ ಆರ್ಥಿಕ ಪ್ಯಾಕೇಜ್‌ನಲ್ಲಿ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನೀಡುತ್ತಿರುವ ೫ ಸಾವಿರ ಧನ ಸಹಾಯವನ್ನು ಶಾಲೆಯ ಇತರ ಸಿಬ್ಬಂದಿಗಳಿಗೂ ಮತ್ತು ಅನುದಾನಿತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಶಿಕ್ಷಕರಿಗೂ ವಿಸ್ತರಿಸಲು ಕ್ರಮವಹಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಅಧಿಕಾರಿಗಳಿಗೆ ಸೂಚಿಸಿದರು.


೨೦೨೧-೨೨ನೇ ಶೈಕ್ಷಣಿಕ ವರ್ಷ ಆರಂಭವಾಗುವ ಪೂರ್ವದಲ್ಲಿಯೇ ಶಾಲೆಯಲ್ಲಿರುವ ಎಲ್ಲಾ ಸಿಬ್ಬಂದಿಗಳನ್ನು ಕೋವಿಡ್ ವಾರಿರ‍್ಸ್ ಎಂದು ಪರಿಗಣಿಸಿ ಲಸಿಕೆ ನೀಡಲು ಕ್ರಮವಹಿಸುವುದು ಸೇರಿದಂತೆ ಮುಂದಿನ ಪರೀಕ್ಷೆ ಸಮಯದಲ್ಲಿ ಹಾಜರಾಗುವ ಸಿಬ್ಬಂದಿಗಳಿಗೆ ಸಹ ಲಸಿಕೆ ನೀಡುವುದು ಮತ್ತು ತಕ್ಷಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು ಹಾಗೂ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕೋವಿಡ್‌ನಿಂದ ಶಿಕ್ಷಣ ಕ್ಷೇತ್ರದಲ್ಲಾದ ಪರಿಣಾಮಗಳು ಮತ್ತು ಸಮಸ್ಯೆಗಳು ಕುರಿತಂತೆ ಚರ್ಚಿಸಲಾಯಿತು. ನಂತರ, ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿದ್ದು, ಅದನ್ನು ಸರಳೀಕರಿಸಿ, ರಾಜ್ಯಾದ್ಯಾಂತ ಒಂದೇ ನಮೂನೆಯ ಚೆಕ್‌ಲೀಸ್ಟ್ನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಕ್ರಮವಹಿಸುವುದು ಹಾಗೂ ಕನಿಷ್ಠ ೫ ವರ್ಷಗಳಿಗೆ ಮಾನ್ಯತೆ ನೀಡವುದು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಗಣಕೀಕೃತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಅನುದಾನಿತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ವಿಭಾಗದಲ್ಲಿ ಮುಖ್ಯಾಧ್ಯಾಪಕರಾಗಿ ಸಲ್ಲಿಸುವ ಹಿರಿಯ ಶಿಕ್ಷಕರಿಗೆ ಮುಖ್ಯಾಧ್ಯಾಪಕ ಹುದ್ದೆಗೆ ಬಡ್ತಿ ನೀಡುವುದು ಅಥವಾ ವಿಶೇಷ ವೇತನ ಬಡ್ತಿಯನ್ನಾದರು ನೀಡುವ ಕುರಿತು ಪರಿಶೀಲಿಸಲಾಗುವುದು. ಮುಂದುವರೆದು ಶಿಕ್ಷಕರ ನೇಮಕಾತಿಗೆ ಆರ್ಥಿಕ ಮಿತವ್ಯಯ ತೆರವುಗೊಳಿಸುವುದು, ಸರ್ಕಾರಿ ನೌಕರರಿಗೆ ಸಿಗುವ ಜ್ಯೋತಿ ಸಂಜೀವಿನಿ ಸೌಲಭ್ಯ ಅನುದಾನಿತ ನೌಕರರಿಗೆ ವಿಸ್ತರಿಸುವುದು, ತರಗತಿಯ ವಿದ್ಯಾರ್ಥಿಗಳ ಅನುಪಾತ ೧:೫೦ ನಿಗದಿಪಡಿಸುವುದು ಸೇರಿದಂತೆ ಪಿಯು ಕಾಲೇಜಿನ ಶಿಕ್ಷಕರ ಮುಂಬಡ್ತಿ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ (ಪ್ರಾಥಮಿಕ ಮತ್ತು ಪ್ರೌಢ) ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸೇರಿದಂತೆ ಇತರೆ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
Tags

Post a Comment

0Comments

Post a Comment (0)