ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಸಿಇಟಿ ಅಂಕ ಪರಿಗಣಿಸಲು ಸುರೇಶ್ ಕುಮಾರ್ ಸಲಹೆ

varthajala
0

 ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣಿಸುವಂತೆ, ದ್ವೀತಿಯ ಪಿಯುಸಿ ಪರೀಕ್ಷೆ ಅಂಕ ಅಥವಾ ಗ್ರೇಡಿಂಗ್ ಗಳನ್ನು ಪರಿಗಣಿಸದಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಉನ್ನತ ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರಿಗೆ ಸುರೇಶ್ ಕುಮಾರ್ ಪತ್ರ ಬರೆದು ಅಧಿಕೃತ ಮಾಹಿತಿ ನೀಡಿದ್ದಾರೆ. ಜೊತೆಗ ಈ ತಿಂಗಳಾಂತ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಗ್ರೆಡಿಂಗ್ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.


ಅಶ್ವಥನಾರಾಯಣ ಅವರಿಗೆ ಬರೆದಿರುವ ಪತ್ರದಲ್ಲಿ, ಕೋವಿಡ್ ಪ್ರಸರಣದ ತೀವ್ರತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಗಳ ನಡುವೆ ಸಮತೋಲನ ತರಲು ದ್ವೀತಿಯ ಪರೀಕ್ಷೆಗಳನ್ನು ರದ್ದು ಪಡಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಿರ್ದಿಷ್ಠವಾದ ತರ್ಕವನ್ನು ಅನುಸರಿಸಲಾಗಿದೆ ಎಂದಿದ್ದಾರೆ.

ಪರೀಕ್ಷೆ ನಡೆಸದೆ ಇದ್ದರೂ ಈ ಮೊದಲು ವಿದ್ಯಾರ್ಥಿಗಳು ಪಿಯುಸಿ ಮೊದಲ ವರ್ಷದಲ್ಲಿ ಗಳಿಸಿದ ಅಂಕಗಳು ಹಾಗೂ ಎಸ್ ಎಸ್ ಎಲ್ ಸಿ ಫಲಿತಾಂಶ ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯಮಾಪನ ಸೇರ್ಪಡೆ ಮಾಡಿ ಗ್ರೇಡಿಂಗ್ ಫಲಿತಾಂಶ ನೀಡಲು ನಿರ್ಧರಿಸಲಾಗಿದೆ. ಒಂದು ವೇಳೆ ನಿರ್ಧರಿಸಲಾಗದ ಗ್ರೇಡಿಂಗ್ ಬಗ್ಗೆ ಯಾವುದೇ ವಿದ್ಯಾರ್ಥಿ ಅತೃಪ್ತಿ ಹೊಂದಿದ್ದರೆ, ಅಂತಹ ವಿದ್ಯಾರ್ಥಿಗಳು ಕ್ಲಪ್ತ ಸಮಯದಲ್ಲಿ ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲಿ ಇದಕ್ಕಿಂತ ಪ್ರಸ್ತುತ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟ ಸಾಧ್ಯ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಅಂಕಗಳನ್ನು ಸಿಇಟಿ ಪರೀಕ್ಷೆಗೆ ಪರಿಗಣಿಸಿ ಸೂಕ್ತ ವೇಟೇಜ್ ಕಲ್ಪಿಸುವ ಮೂಲಕ ಫಲಿತಾಂಶ ಘೋಷಿಸಲಾಗುತ್ತದೆ. ಈ ಬಾರಿಯ ಗ್ರೇಡಿಂಗ್ ಫಲಿತಾಂಶವೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಖಚಿತವಾಗಿ ವ್ಯಕ್ತ ಪಡಿಸಿದರೂ, ಅವರಿಗೆ ಅದನ್ನು ನಿರಾಕರಿಸಿ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಇಲ್ಲದೆ ಗ್ರೇಡಿಂಗ್ ಪಡೆದವರಿಗೆ ಮತ್ತು ಗ್ರೇಡಿಂಗ್ ನಿರಾಕರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶವನ್ನು ಸಿಇಟಿಗೆ ಪರಿಗಣಿಸುವುದು ಅನಾನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಹಾಗಾಗಿ ದ್ವಿತೀಯ ಪಿಯುಸಿ ಫಲಿತಾಂಶ ಆಧರಿಸಿ ವೇಟೇಜ್ ನೀಡುವ ಪ್ರಕ್ರಿಯೆಯನ್ನು ಈ ವರ್ಷಕ್ಕೆ ಸೀಮಿತವಾಗಿ ಕೈ ಬಿಟ್ಟು, ಕೇವಲ ಸಿಇಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ RANKING ಗೆ ಪರಿಗಣಿಸುವಂತೆ ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ. ಖುದ್ದಾಗಿ ಭೇಟಿಯಾಗಿ ಚರ್ಚೆ ಮಾಡಲಾದ ಅಂಶಗಳನ್ನು ಪರಿಗಣಿಸುವಂತೆಯೂ ಮನವಿ ಮಾಡಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೂ ಪತ್ರ ಬರೆದಿರುವ ಸಚಿವ ಸುರೇಶ್ ಕುಮಾರ್ ಅವರು, 2020-21ನೇ ಸಾಲಿನಲ್ಲಿ ದಾಖಲಾಗಿರುವ ದ್ವಿತೀಯ ಪಿಯಿಸಿ ಹೊಸ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಘೋಷಿಸುವಲ್ಲಿ ಅವರು ಈ ಹಿಂದೆ ಮೊದಲ ವರ್ಷದ ಪಿಯುಸಿಯಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ಮಾರ್ಗಸೂಚಿ ಸೂತ್ರಗಳನ್ನು ತಯಾರಿಸಲು ಸೂಚನೆ ನೀಡಿದ್ದಾರೆ.




Post a Comment

0Comments

Post a Comment (0)