ಮೈಸೂರು: ಕೊರೊನಾದಿಂದ ಅನಾಥರಾಗಿರುವ ಮಕ್ಕಳಿಗೆ ಜೆಎಸ್‌ಎಸ್ ಶಾಲೆಗಳಲ್ಲಿ ಜೂನ್ 1ನೇ ತಾರೀಖಿನಿಂದಲೇ 1 ತರಗತಿಯಿಂದ 10ನೇ ತರಗತಿಯವರೆ ದಾಖಲಾತಿಯನ್ನು ಆರಂಭಿಸಿದೆ. ಇಷ್ಟೆ ಅಲ್ಲದೆ ಶ್ರೀಮಠದ ಎಲ್ಲ ಸಮಯದಾಯಭವನ ಹಾಗೂ ಹಾಸ್ಟೆಲ್, ಕಲ್ಯಾಣಮಂಟಪವನ್ನ ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಲು ಮುಂದಾಗಿದೆ.
ಹಳೆ ಮೈಸೂರು ಭಾಗದಲ್ಲಿ ಸುತ್ತೂರು ಶ್ರೀಮಠವೆಂದರೆ ಭಕ್ತರ ಪಾಲಿಗೆ ಆಶಾಕಿರಣದಂತಿದೆ. ಆರೋಗ್ಯ, ಶಿಕ್ಷಣ, ಅನ್ನದಾಸೋದಲ್ಲಿ ಈಗಾಗಲೇ ಪ್ರಖ್ಯಾತಿ ಗಳಿಸಿರುವ ಸುತ್ತೂರು ಮಠ ತನ್ನ ಒಡೆತನದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗಾಗಿ ಸರ್ಕಾರಕ್ಕೆ 50% ಬೆಡ್ ನೀಡಿದೆ. ಇಷ್ಟೆ ಅಲ್ಲದೆ, ಹೆಚ್ಚುವರಿ 300 ಬೆಡ್ ನೀಡುವ ಸಲುವಾಗಿ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಶ್ರೀಮಠದಿಂದ ಮಹತ್ವದ ಘೋಷಣೆಯೊಂದನ್ನ ಮಾಡಿದ್ದು, ಕೊರೊನಾ ಕೂಪಕ್ಕೆ ಸಿಲುಕಿ ಅನಾಥರಾದ ಅಥವಾ ಒಬ್ಬರೇ ಪೋಷಕರ ಆರೈಕೆಯಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿದೆ.
ಈ ವರ್ಷದ ಜುಲೈ 1ರಿಂದ ರಾಜ್ಯದ ಯಾವುದೇ ಭಾಗದಿಂದ ಯಾವುದೇ ತರಗತಿಗೆ ಮಕ್ಕಳ ಹಾಜರಾತಿಯನ್ನ ಮಾಡಬಹುದು. ಇದು ರಾಜ್ಯದಲ್ಲಿರುವ ಎಲ್ಲಾ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಲಿದೆ ಎಂದು ಸುತ್ತೂರು ಶ್ರೀಕ್ಷೇತ್ರದ ಮಠಾಧಿಪತಿ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮಿ ತಿಳಿಸಿದ್ದಾರೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಶ್ರೀಮಠದ ಆಡಳಿತ ಮಂಡಳಿ, ಮಠದ ಒಡೆತನದಲ್ಲಿರುವ ಯಾವುದೇ ಸಮಯದಾಯಭವನ, ಕಲ್ಯಾಣಮಂಟಪ, ಕಾಲೇಜು ಹಾಸ್ಟೇಲ್ ಹಾಗೂ ಶಾಲಾ ಹಾಸ್ಟೇಲ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ. ಅಂದರೆ ಸೋಂಕಿತರಿಗೆ ಹೋಂ ಐಸೋಲೇಷನ್ನಲ್ಲಿ ಇರಲು ಸಾಧ್ಯವಾಗದೆ ಇದ್ದರೆ, ಮಠ, ಕಲ್ಯಾಣ ಮಂಟಪ,ಹಾಸ್ಟೆಲ್‌ನಲ್ಲಿ ಬಂದು ವಿಶ್ರಾಂತಿ ಜೊತೆಗೆ ಚಿಕಿತ್ಸೆ ಪಡೆಯಬಹುದು. ಸರ್ಕಾರಕ್ಕೆ ತೀರ ಅಗತ್ಯ ಬಿದ್ದರೆ ನಮ್ಮ ಕಟ್ಟಡಗಳಲ್ಲಿ ಕೋವಿಡ್ ಸೆಂಟರ್‌ಗಳಾಗಿ ಬಳಸಿಕೊಳ್ಳಬಹುದು ಅಂತಾನು ತಿಳಿಸಿದ್ದಾರೆ.
ಶ್ರೀಮಠದಿಂದ ಸರ್ಕಾರಕ್ಕೆ ಈಗಾಗಲೆ ಹಲವು ರೀತಿಯ ಸಹಕಾರ ನೀಡಲಾಗಿದೆ. ಆಕ್ಸಿಜನ್ ಬೆಡ್‌ನಿಂದ ಹಿಡಿದು, ಸ್ಯಾನಿಟೈಸರ್ವರೆಗು ಎಲ್ಲವನ್ನು ನೀಡಲಾಗಿದೆ. ಆದ್ರೆ ಈ ಬಾರಿ ಮಕ್ಕಳ ವಿದ್ಯಾಭ್ಯಾಸ ಹೊಣೆಯನ್ನ ಸಂಪೂರ್ಣವಾಗಿ ಮಠವೇ ವಹಿಸಿಕೊಂಡಿರೋದು ನಿಜಕ್ಕೂ ಶ್ಲಾಘನೀಯ. ಕೊರೊನಾ ಕಷ್ಟದಲ್ಲಿ ಯಾರ ಮಕ್ಕಳಿಗಾದರೂ ವಿದ್ಯಾಭ್ಯಾಸ ವಂಚಿತವಾಗುತ್ತಿದೆ ಎನ್ನುವುದಾದರೆ, ಅಂತವರು ಸುತ್ತೂರು ಮಠದ ಶಾಖೆಗಳನ್ನ ಸಂಪರ್ಕಿಸಿ, 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಯಾವುದೇ ಮಕ್ಕಳನ್ನ ದಾಖಲಿಸಬಹುದಾಗಿದೆ. ಸುತ್ತೂರು ಮಠ ಹಿಂದಿನಿಂದಲೂ ಜನಸೇವೆಯ ಮೂಲಕ ಹೆಸರುವಾಸಿಯಾಗಿದ್ದು, ಶಿಕ್ಷಣ ಕ್ರಾಂತಿಗೆ ಕಾರಣವಾಗಿದ್ದ ರಾಜೇಂದ್ರ ಶ್ರೀಗಳು ಸಮಯದಲ್ಲಿ ನೆನಪಾಗುತ್ತಿದ್ದಾರೆ.