ಮೈಸೂರು, ಫೆಬ್ರವರಿ 11: ಕಲೆ ಎಂಬುದು ಒಬ್ಬರ ಸ್ವತ್ತಲ್ಲ. ಕಲ್ಪನಾ ಲೋಕದ ಬಣ್ಣ ಬಣ್ಣದ ಕಲ್ಪನೆಗಳಿಗೆ ರೂಪ ನೀಡುವ ಕಲೆ. ಆಸಕ್ತರ ಸೃಜನಶೀಲತೆಯ ಮೂಸೆಯಲ್ಲಿ ಅರಳುವ ಸುಂದರವಾದ ಹೂವು. ಅಂತಹ ವಿಶೇಷವಾದ ಕಲೆಯಲ್ಲಿ ತನ್ನೊಳಗೆ ಅಡಗಿದ್ದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರಮಟ್ಟದ ದೃಶ್ಯ ಕಲೋತ್ಸವದಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚಂದನಾ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕಲೆ, ಸಂಶೋಧನೆಗಳನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಭಾರತ ಸರ್ಕಾರದ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್.ಸಿ.ಇ.ಆರ್.ಟಿ) ವತಿಯಿಂದ ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ಜನವರಿ 15 ಮತ್ತು 16ರಂದು ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ದೃಶ್ಯಕಲೋತ್ಸವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.