ಭಾರತ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020

varthajala
0

ಸದೃಢ ಭಾರತ ನಿರ್ಮಾಣಕ್ಕೆ ಯುವಜನತೆ ಎಷ್ಟು ಮುಖ್ಯವೋ, ಅವರನ್ನು ಸುಶಿಕ್ಷಿತರನ್ನಾಗಿಸಿ, ಭವಿಷ್ಯದ ನಿರ್ಮಾತೃಗಳನ್ನಾಗಿಸುವಲ್ಲಿ ಶಿಕ್ಷಕರು, ಪ್ರಾಧ್ಯಾಪಕರ ಪಾತ್ರವೂ ಅಷ್ಟೇ ಮುಖ್ಯ. ಅವರಿಬ್ಬರ ನಡುವೆ ಸೇತುವೆಯಾಗಿರುವಂಥದ್ದು ಪಠ್ಯಕ್ರಮ. ಕಳೆದ ಕೆಲವು ದಶಕಗಳಿಂದ ದೇಶೀಯ ಶಿಕ್ಷಣ ಕ್ಷೇತ್ರದಲ್ಲಿನ ಸಂಕೀರ್ಣತೆಗಳಿಂದಾಗಿ ವಿದ್ಯಾರ್ಥಿಗಳು-ಬೋಧಕರು-ಪಠ್ಯಕ್ರಮ... ಈ ಮೂರರಲ್ಲಿ ಗಣನೀಯ ಬದಲಾವಣೆಗಳು ಆಗಿರಲಿಲ್ಲ. ಈಗ, ಅದಕ್ಕೆ ಕಾಲ ಕೂಡಿ ಬಂದಿದೆ. ಕಾಲಕ್ಕೆ ತಕ್ಕಂಥ ಪಠ್ಯಕ್ರಮ, ದಕ್ಷ ಬೋಧಕರನ್ನು ರೂಪಿಸಿ ಕೋರ್ಸ್‍ಗಳು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆಯೂ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ.


ಬಿ.ಎಡ್ ನಾಲ್ಕು ವರ್ಷ

ಶಿಕ್ಷಕ ವೃತ್ತಿಗೆ ಸೇರಬಯಸುವವರು ಇನ್ನು ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಬಿ.ಎಡ್ ಮಾಡುವುದು ಕಡ್ಡಾಯವಾಗಲಿದೆ. ಈ ನಿಯಮ 2030 ರ ಹೊತ್ತಿಗೆ ಜಾರಿಗೆ ಬರಲಿದೆ. ಆದರೆ ಇಲ್ಲೊಂದು ವಿನಾಯ್ತಿಯಿದೆ. ಪದವಿ ಶಿಕ್ಷಣ ಮುಗಿಸಿ ಬಿ.ಎಡ್ ಮಾಡುವವರಿಗೆ ಎರಡು ವರ್ಷಗಳ ಬಿ.ಎಡ್ ವ್ಯಾಸಂಗ ಸಾಕು. ಬಿ.ಎಡ್ ನಂತರ ಯಾವುದಾದರೂ ವಿಷಯದಲ್ಲಿ ಪರಿಣಿತಿ ಪಡೆಯಲು ನಿರ್ಧರಿಸಿದರೆ ಅದಕ್ಕೆ ಪ್ರತ್ಯೇಕವಾಗಿ ಒಂದು ವರ್ಷದ ಕೋರ್ಸ್ ಅನ್ನು ಜಾರಿಗೊಳಿಸಲಾಗುತ್ತದೆ ಎಂದು ಹೊಸ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ವಿಶೇಷ ಪ್ರತಿಭೆಗಳುಳ್ಳ ವಿದ್ಯಾರ್ಥಿಗಳನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಶಿಕ್ಷಕರನ್ನು ತರಬೇತಿಗೊಳಿಸಲು ಸೂಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

2 ವರ್ಷದ ಬಿ.ಎಡ್‍ಗೆ ತಿಲಾಂಜಲಿ

2030 ರಿಂದ ಎರಡು ವರ್ಷಗಳ ಬಿ.ಎಡ್ ಕೋರ್ಸ್‍ಗಳು ಸಂಪೂರ್ಣ ನಿಲುಗಡೆಯಾಗಲಿವೆ. ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್‍ಗಳು ಹೊಂದಿರುವ ಕಾಲೇಜುಗಳಲ್ಲಿ ಮಾತ್ರ ಸ್ನಾತಕ ಪದವಿ ಕೋರ್ಸ್‍ಗಳು ಮಾಡಲು ಅವಕಾಶವಿರುತ್ತದೆ. ಇನ್ನು 4 ವರ್ಷಗಳ ಸ್ನಾತಕ ಪದವಿ ಹಾಗೂ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆದವರಿಗೆ ಬಿ.ಎಡ್ 1 ವರ್ಷ ಮಾತ್ರ ಇರಲಿದೆ. ಇದಲ್ಲದೆ, 2030 ರ ಹೊತ್ತಿಗೆ ಬಿ.ಎಡ್ ಶಿಕ್ಷಣವು ಇನ್ನು ಬಹು ವಿಷಯ ಬೋಧನಾ ಶಿಕ್ಷಣ ಸಂಸ್ಥೆಗಳಲ್ಲೂ ಲಭ್ಯವಾಗಲಿದೆ. ಶಿಕ್ಷಕರ ಕೌಶಲ್ಯಾಭಿವೃದ್ಧಿಗಾಗಿ ಬಿಐಟಿಇಗಳಲ್ಲಿ, ಡಯಟ್‍ಗಳಲ್ಲಿ ಅಥವಾ ಶಾಲಾ ಸಂಕೀರ್ಣಗಳಲ್ಲಿ ಅಲ್ಪಾವಧಿಯ ಕೋರ್ಸ್‍ಗಳನ್ನು ಆರಂಭಿಸುವುದಾಗಿ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ. 

ಶಿಕ್ಷಕರ, ಪ್ರಾಧ್ಯಾಪಕರ ವರ್ಗಾವಣೆಗೆ ಲಗಾಮು

ಶಾಲಾ ಶಿಕ್ಷಣವಾಗಲೀ, ಉನ್ನತ ಶಿಕ್ಷಣವಾಗಲೀ ಅಲ್ಲಿ ಬೋಧಕ ಮತ್ತು ವಿದ್ಯಾರ್ಥಿಗಳ ನಡುವೆ ವಿಷಯಾಧಾರಿತ ನಂಟು ಬೆಳೆದಿರುತ್ತದೆ. ಶಿಕ್ಷಕರನ್ನಾಗಲೀ, ಪ್ರಾಧ್ಯಾಪಕರನ್ನಾಗಲೀ ವರ್ಗಾವಣೆ ಮಾಡಿದಾಗ ಅದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ, ಯಾವುದೇ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಶಿಕ್ಷಕರನ್ನಾಗಲೀ, ಪ್ರಾಧ್ಯಾಪಕರನ್ನಾಗಲೀ ವರ್ಗಾವಣೆ ಮಾಡುವ ಪದ್ಧತಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಹಾಗಾಗಿಯೇ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದಕ್ಕೆ ಹೊಸ ಕಾಯಕಲ್ಪ ನೀಡಲಾಗಿದೆ. ಶಿಕ್ಷಕರ ವರ್ಗಾವಣೆಯನ್ನು ಶೈಕ್ಷಣಿಕ ವರ್ಷಗಳು ಮುಗಿದ ನಂತರವಷ್ಟೇ ನಡೆಸಲು ಅಥವಾ ಅಂಥ ವರ್ಗಾವಣೆಗಳನ್ನು ಶೈಕ್ಷಣಿಕ ವರ್ಷ ಮುಗಿಯುವವರೆಗೂ ತಡೆ ಹಿಡಿಯಲು ಅವಕಾಶ ಕಲ್ಪಿಸಲಾಗಿದೆ. 

ಸಹಾಯಕ ಶಿಕ್ಷಕರ ವೃತ್ತಿಗೆ ತಿಲಾಂಜಲಿ

`ಶಿಕ್ಷಕಕರ್ಮಿ' ಅಥವಾ `ಶಿಕ್ಷಕ ಮಿತ್ರ' ಎಂದು ಕರೆಯಲ್ಪಡುವ ಸಹಾಯಕ ಶಿಕ್ಷಕರ ನೇಮಕಾತಿಗಳು ದೇಶದ ಅಲ್ಲಲ್ಲಿ ಚಾಲ್ತಿಯಲ್ಲಿವೆ. ಈ ಪ್ರಕಾರದ ನೇಮಕಾತಿಗೆ 2020 ರೊಳಗೆ ತಡೆ ನೀಡಲಾಗುತ್ತದೆ. ಪೂರ್ಣಪ್ರಮಾಣದ ಶಿಕ್ಷಕರನ್ನು ನೇಮಿಸುವುದು. ಶಿಕ್ಷಕ, ವಿದ್ಯಾರ್ಥಿಗಳ ಬಾಂಧವ್ಯವನ್ನು ಹೆಚ್ಚಿಸಿ ಆ ಮೂಲಕ ಗುಣಮಟ್ಟದ ಕಲಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. 

ರಾಷ್ಟ್ರೀಯ ಮಟ್ಟದಲ್ಲಿ ಪ್ರವೇಶ

· ಶಿಕ್ಷಕರ ಅರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ 2021ರ ಹೊತ್ತಿಗೆ ರಾಷ್ಟ್ರೀಯ ಕರಡು ಸಿದ್ಧ.

· ಬಿ.ಎಡ್ ದಾಖಲಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪರೀಕ್ಷೆ

· ಗುಣಮಟ್ಟವಿರದ ಸ್ಟ್ಯಾಂಡ್ ಅಲೋನ್ ಬಿ.ಎಡ್ ಕಾಲೇಜುಗಳ ವಿರುದ್ಧ ಕ್ರಮ

· ಶಿಕ್ಷಕರ ವಿದ್ಯಾಭ್ಯಾಸ ಹಾಗೂ ಉನ್ನತ ವ್ಯಾಸಂಗದ ಉಸ್ತುವಾರಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಕೌನ್ಸಿಲ್ (ಎನ್‍ಎಚ್‍ಆರ್‍ಸಿ) ಹೆಗಲಿಗೆ

· ನಾಲ್ಕು ವರ್ಷಗಳ ಬಿ.ಎಡ್ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವವರಿಗೆ ಮೆರಿಟ್ ಆಧಾರಿತ ಸ್ಕಾಲರ್‍ಶಿಪ್

· ಉತ್ಕøಷ್ಟ ಪ್ರತಿಭೆ, ಅನುಭವವುಳ್ಳ ಹಿರಿಯ ಹಾಗೂ ನಿವೃತ್ತ ಶಿಕ್ಷಕರ ಹಿತರಕ್ಷಣೆಗಾಗಿ ರಾಷ್ಟ್ರೀಯ ಮಿಷನ್ ಜಾರಿಗೊಳಿಸಲು ತೀರ್ಮಾನ

ವಿಶೇಷ ಚೇತನ ಮಕ್ಕಳಿಗೆ ವಿದ್ಯೆ

· ದಿವ್ಯಾಂಗ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕ್ರಮ, ವಿಧಾನಗಳುಳ್ಳ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಆರಂಭಿಸಲಾಗುತ್ತದೆ. ಆಸಕ್ತ ಶಿಕ್ಷಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಈ ಸರ್ಟಿಫಿಕೇಟ್ ಕೋರ್ಸ್ ಮುಗಿಸಿದ ಶಿಕ್ಷಕರನ್ನು ವಿಶೇಷ ಶಿಕ್ಷಕರೆಂದು ಕರೆಯಲಾಗುತ್ತದೆ. 

· ದಿವ್ಯಾಂಗ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ಆರಂಭಿಸಲಾಗುತ್ತದೆ. 

· ಶ್ರವಣದೋಷವಿರುವ ಮಕ್ಕಳಿಗಾಗಿ ಎನ್‍ಐಒಎಸ್ ವತಿಯಿಂದ ಸಂಜ್ಞಾ ಭಾಷೆಯ ಮೂಲಕ ಶಿಕ್ಷಣ ನೀಡುವ ಕುರಿತಾದ ತರಬೇತಿಯ ರೂಪುರೇಷೆಗಳನ್ನು ರಚಿಸಲಾಗುತ್ತದೆ. 

ನೇಮಕಾತಿ ನಿರ್ವಹಣೆಯಲ್ಲಿ ಪಾರದರ್ಶಕತೆ

· ಶಿಕ್ಷಕರ ನೇಮಕಾತಿ, ವರ್ಗಾವಣೆ ಎಲ್ಲವೂ ಕಂಪ್ಯೂಟರೀಕೃತಗೊಳ್ಳಲ್ಲಿದ್ದು ಎಲ್ಲಾ ಪ್ರಕ್ರಿಯೆಗಳೂ ಪಾರದರ್ಶಕವಾಗಲಿವೆ.

· ಟಿಇಟಿಯ ಎಲ್ಲಾ ಹಂತಗಳನ್ನು ಪುನಶ್ಚೇತನಗೊಳಿಸಿ ದಕ್ಷ ಶಿಕ್ಷಕರ ನೇಮಕಾತಿಗೆ ಒತ್ತು. 

· ತಂತ್ರಜ್ಞಾನ ಆಧಾರದಲ್ಲಿ ಶಿಕ್ಷಕರ ನೇಮಕಾತಿ.

· ವಿಷಯಾಧಾರಿತ ಶಿಕ್ಷಕರ ನೇಮಕಾತಿಯಲ್ಲಿ ಟಿಇಟಿ ಅಥವಾ ಎನ್‍ಟಿವಿ ಹಾಗೂ ತರಗತಿಗಳಲ್ಲಿ ಶಿಕ್ಷಕರ ಪರಿಣಾಮಕಾರಿ ಬೋಧನೆ ಆಧಾರದಲ್ಲಿ ನೇಮಕಾತಿಗೆ ಅವಕಾಶ.

· ಜನರಲ್ ಎಜುಕೇಷನ್ ಕೌನ್ಸಿಲ್ (ಜೆಇಸಿ) ಅಡಿಯಲ್ಲಿ ಎನ್‍ಸಿಟಿಇಯ ಸ್ವರೂಪವನ್ನು ಬದಲಾಯಿಸಿ ಶಾಲಾ ಶಿಕ್ಷಣದ ಗುಣಮಟ್ಟದ ಮೇಲೆ ಗಮನವಿಡುವಂತೆ ಮಾಡಲಾಗುತ್ತದೆ. 

· ಕಾಲಾನುಗತಿಗೆ ತಕ್ಕಂತೆ ಶಿಕ್ಷಕರು ತಮ್ಮ ವಿಷಯಾಧಾರಿತ ಜ್ಞಾನ ಹಾಗೂ ಬೋಧನಾ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡಲಾಗುತ್ತದೆ. 

ಮೊದಲೆರಡು ವರ್ಷ ಸಾಮಾನ್ಯ ಪಠ್ಯ

ಎಂಬಿಬಿಎಸ್ ಕೋರ್ಸ್‍ನ ಮೊದಲ ಹಾಗೂ ಎರಡನೇ ವರ್ಷವನ್ನು ಸಾಮಾನ್ಯ ಅವಧಿಯೆಂದು ಪರಿಗಣಿಸಲು ನಿರ್ಧರಿಸಲಾಗಿದೆ. ಅಂದರೆ ಎಂಬಿಬಿಎಸ್, ಡೆಂಟಲ್, ನರ್ಸಿಂಗ್ ಹಾಗೂ ಇನ್ನಿತರ ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‍ಗಳ ಮೊದಲ ಎರಡು ವರ್ಷಗಳಲ್ಲಿನ ಪಠ್ಯಕ್ರಮವನ್ನು ಒಂದೇ ರೀತಿಯಲ್ಲಿ ರೂಪಿಸಲಾಗುತ್ತದೆ. ಹಾಗಾಗಿ, ಈ ಕೋರ್ಸ್‍ಗಳಲ್ಲಿ ಮೊದಲೆರಡು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಯು, ಎಕ್ಸಿಟ್-ಕಂ-ಎಂಟ್ರೆನ್ಸ್ ಪರೀಕ್ಷೆ ಬರೆದು ಅಲ್ಲಿ ತೋರುವ ಸಾಧನೆಯ ಆಧಾರದಲ್ಲಿ ಎಂಬಿಬಿಎಸ್, ಡೆಂಟಲ್, ನರ್ಸಿಂಗ್, ಫಿಸಿಯೋಥೆರಪಿ ಮುಂತಾದ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 

ಎಂಬಿಬಿಎಸ್ ಕಾಮನ್ ಎಕ್ಸಿಟ್ ಪರೀಕ್ಷೆ

ಎಂಬಿಬಿಎಸ್ ಶಿಕ್ಷಣದ ನಾಲ್ಕನೇ ವರ್ಷ ಪೂರೈಸಿದ ವಿದ್ಯಾರ್ಥಿಗಳಿಗಾಗಿ, ಕಾಮನ್ ಎಕ್ಸಿಟ್ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಯು ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗಕ್ಕೆ ಪ್ರವೇಶ ಪರೀಕ್ಷೆಯೂ ಆಗಿರಲಿದೆ. ಆದ ಕಾರಣ, ಇಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಸ್ನಾತಕೋತ್ತರ ಪ್ರವೇಶಕ್ಕೆ ಅವಕಾಶ ಗಿಟ್ಟಿಸಿಕೊಂಡು ತಮ್ಮ ಹೌಸ್‍ಸರ್ಜನ್‍ಶಿಪ್ ಅವಧಿಯನ್ನು ನಿಶ್ಚಿಂತೆಯಿಂದ ಮುಗಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ಸೌಲಭ್ಯವನ್ನು ಡೆಂಟಲ್ ವಿದ್ಯಾರ್ಥಿಗಳಿಗೂ ನೀಡಲು ತೀರ್ಮಾನಿಸಲಾಗಿದೆ. 

ಜನರಲ್ ನರ್ಸಿಂಗ್‍ಗೆ ಕೊಕ್

ಶುಶ್ರೂಷಕರಾಗಲು ಬಯಸುವವರು ಇನ್ನಷ್ಟು ಕಡ್ಡಾಯವಾಗಿ ಬಿ.ಎಸ್ಸಿ ನರ್ಸಿಂಗ್ ಮುಗಿಸಿದ ನಂತರವೇ ಆ ಕ್ಷೇತ್ರಕ್ಕೆ ಕಾಲಿಡಬೇಕಾಗುತ್ತದೆ. ಈಗ ಇರುವ ಜನರಲ್ ನರ್ಸಿಂ ಅಂಡ್ ಮಿಡ್‍ವೈಫರಿ (ಜಿಎನ್‍ಎಂ) ಕೋರ್ಸನ್ನು ರದ್ದುಗೊಳಿಸಲು ನಿರ್ಧರಿಸಲಾಗಿದ್ದು, ಅದು ಹಂತಹಂತವಾಗಿ ಜಾರಿಗೆ ಬರಲಿದೆ. ಶುಶ್ರೂಷಕ ವ್ಯಾಸಂಗದ ಗುಣಮಟ್ಟ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವೈದ್ಯರೇ ಇಲ್ಲದ ಪ್ರಾಂತ್ಯಗಳಲ್ಲಿ ಶುಶ್ರೂಷಕರ ನೆರವು ಹೆಚ್ಚಾಗಿ ಜನರಿಗೆ ಸಿಗುವಂತಾಗಲು, ನರ್ಸ್ ಪ್ರಾಕ್ಟೀಷನರ್ ಎಂಬ ಹೊಸ ಕೋರ್ಸ್‍ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಆನ್-ದ-ಜಾಬ್ ಟ್ರೈನಿಂಗ್ ಮಾದರಿಯಲ್ಲಿ ಜನರಲ್ ಡ್ಯೂಟಿ ಅಸಿಸ್ಟೆಂಟ್‍ಗಳಿಗೆ(ಜಿಡಿಎ) ತುರ್ತು ವೈದ್ಯಕೀಯ ಸಿಬ್ಬಂದಿಗೆ (ಇಎಂಟಿ-ಬಿ), ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಲ್ಯಾಬ್ ಟೆಕ್ನೀಷಿಯನ್‍ಗಳಿಗೆ ಕೌಶಲ್ಯಾಭಿವೃದ್ಧಿಯ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ನಡೆಸಲು ನಿರ್ಧರಿಸಲಾಗಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಬೋಧನಾ ಸಂಸ್ಥೆಗಳಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ. 

ಕೃಷಿ ವಿಶ್ವವಿದ್ಯಾಲಯ, ಪಶು ವೈದ್ಯಕೀಯಕ್ಕೆ ಹೊಸ ಸ್ಪರ್ಶ

ತಾಂತ್ರಿಕ ವಿಶ್ವವಿದ್ಯಾಲಯಗಳು, ಆರೋಗ್ಯ ವಿಜ್ಞಾನ ವಿದ್ಯಾಲಯಗಳು, ಕಾನೂನು ಮತ್ತು ಕೃಷಿ ವಿಶ್ವವಿದ್ಯಾಲಯಗಳು ಸ್ವತಂತ್ರವಾಗಿ ಸ್ಥಾಪನೆಯಾಗುವ ಪರಿಪಾಠಕ್ಕೆ ಅಂತ್ಯ ಹಾಡಲಾಗುತ್ತದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಉದಾಹರಣೆಗೆ, ದೇಶದೆಲ್ಲೆಡೆ ಕೃಷಿ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ಸಂಸ್ಥೆಗಳಿದ್ದರೂ ಅಲ್ಲಿಗೆ ದಾಖಲಾಗುವ ಯುವಜನರ ಪ್ರಮಾಣ ಶೇ. 1 ರಷ್ಟಿದೆ. ಇದರಿಂದ ನಮ್ಮ ದೇಶದ ಪ್ರಮುಖ ಕ್ಷೇತ್ರವಾದ ಕೃಷಿಯಲ್ಲಿ ಸುಧಾರಣೆ ತರುವಂತ, ಕ್ರಾಂತಿಕಾರಕ ಬದಲಾವಣೆಗಳನ್ನು ತರುವಂತ ಯುವ ತಜ್ಞರು ನಮ್ಮಲ್ಲಿ ಕಡಿಮೆ ಇದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಸ್ಥಳೀಯ ಕೃಷಿಗಳಿಗೆ ಅನುಗುಣವಾಗಿ ಪಠ್ಯಗಳನ್ನು ರೂಪಿಸಿ ಅದನ್ನು ಶಾಸ್ತ್ರೀಯವಾಗಿ ಕಲಿಯುವಂಥ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಅಂದರೆ ಕೃಷಿ ವ್ಯಾಸಂಗ ಕ್ಷೇತ್ರಕ್ಕೆ ಇನ್ನು ಹೊಸ ಬೆಂಬಲ ಸಿಗಲಿದೆ. ಇಲ್ಲಿಯೂ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆ ಹುಟ್ಟಿಸಿದೆ. 

ಸಮಾಜಸ್ನೇಹಿ ಪಠ್ಯಕ್ರಮಕ್ಕೆ ಒತ್ತು

ತಾಂತ್ರಿಕ ವಿಷಯಗಳಲ್ಲಿ ಸ್ನಾತಕ ಪದವಿಗಳನ್ನು ಪಡೆಯುವ ವಿದ್ಯಾರ್ಥಿಗಳನ್ನು ಹೆಚ್ಚೆಚ್ಚು ವೃತ್ತಿಪರರನ್ನಾಗಿಸಲು ತೀರ್ಮಾನಿಸಲಾಗಿದೆ. ಇಂಥದ್ದೇ ಒಂದು ಪ್ರಯತ್ನದಡಿ ವಾಸ್ತುಶಿಲ್ಪ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ನಗರಗಳ ಯೋಜನೆ, ಸಾಮಾಜಿಕ ವಿಜ್ಞಾನ ಹಾಗೂ ಆರ್ಥಿಕತೆಯಲ್ಲೂ ಪರಿಣಿತಿ ಪಡೆಯುವಂತೆ ಪಠ್ಯಕ್ರಮ ರೂಪಿಸಲಾಗುತ್ತದೆ. ಇದು ಭವಿಷ್ಯದಲ್ಲಿ ಅವರ ಕೆರಿಯರ್‍ಗೆ ಹಾಗೂ ಸಮಾಜಕ್ಕೆ ಎರಡಕ್ಕೂ ಉಪಯೋಗವಾಗುವಂತೆ ರೂಪಿಸಲಾಗುತ್ತದೆ. ತಾಂತ್ರಿಕ ಶಿಕ್ಷಣದ ಗುಣಮಟ್ಟ ಹೆಚ್ಚಳದ ಬಗ್ಗೆ ಗಮನ ಕೊಡುವ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (ಐಎನ್‍ಎಎಫ್) ನಲ್ಲಿ ನಿವೃತ್ತ ವಿಜ್ಞಾನಿಗಳು, ಇಂಜಿನಿಯರುಗಳನ್ನು ಕರೆತಂದು ವಾಸ್ತವಕ್ಕೆ ಹತ್ತಿರವಿರುವಂತಹ ಪಠ್ಯಕ್ರಮ, ತರಬೇತಿಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ. 

ಕೈಗಾರಿಕಾ ಜ್ಞಾನಾರ್ಜನೆಗೆ ಅವಕಾಶ

ವಿದ್ಯಾರ್ಥಿಗಳಿಗೆ ತಾವು ಓದುತ್ತಿರುವ ಇಂಜಿನಿಯರಿಂಗ್ ವಿಷಯದಲ್ಲಿ ಕೈಗಾರಿಕಾ ಜ್ಞಾನ ಪಡೆಯುವಂತೆ ಮಾಡುವ ಉದ್ದೇಶದಿಂದ ಅವರಿಗೆ ಕಾಲೇಜು ಕ್ಯಾಂಪಸ್‍ಗಳಲ್ಲಿ ಇಂಡಸ್ಟ್ರಿ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಕೈಗಾರಿಕಾ ವಲಯದಲ್ಲಿ ಹೆಚ್ಚು ಅನುಭವವಿರುವ ವ್ಯಕ್ತಿಗಳನ್ನು ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಳ್ಳಲು, ಇಂಟರ್ನ್‍ಶಿಪ್‍ಗೆ ಹೆಚ್ಚೆಚ್ಚು ಅವಕಾಶಗಳನ್ನು ಕಲ್ಪಿಸಲು ಅವಕಾಶ ಕಲ್ಪಿಸಲಾಗುತ್ತದೆ. 

ಕಾನೂನು ಶಿಕ್ಷಣದಲ್ಲಿ ಹೊಸತನ

ದೇಶದಲ್ಲಿ ಹಲವಾರು ಕಾನೂನು ಶಿಕ್ಷಣ ಸಂಸ್ಥೆಗಳಿವೆ. ಅವು ಜಾಗತಿಕ ಮಟ್ಟದಲ್ಲಿ ಸೆಣಸುವಂತಹ ದೈತ್ಯ ವಕೀಲರನ್ನು ನಿರೀಕ್ಷಿತ ಮಟ್ಟದಲ್ಲಿ ತಯಾರಿಸುತ್ತಿಲ್ಲ. ಹಾಗಾಗಿ ಈಗಿರುವ ಕಾನೂನು ವ್ಯಾಸಂಗದಲ್ಲಿ ಸಾಂವಿಧಾನಿಕ ಮೌಲ್ಯಗಳ ಜೊತೆ ನ್ಯಾಯ, ಆರ್ಥಿಕ, ಸಾಮಾಜಿಕ, ರಾಜಕೀಯ ತಿಳುವಳಿಕೆ ಸೇರಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಇಂಗ್ಲೀಷ್ ಹಾಗೂ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಕಾನೂನು ವ್ಯಾಸಂಗ ಮಾಡಲು ಅನುವು ಮಾಡಿಕೊಡಲಾಗುತ್ತದೆ. 

ಭಾರತ ಸರ್ಕಾರದ ಹೊಸ ಭಾರತಕ್ಕೆ ಹೊಸ ಶಿಕ್ಷಣ ನೀತಿಯ ದಿಕ್ಸೂಚಿ

ಸಾರ್ವತ್ರೀಕರಣಗೊಂಡ ಪ್ರಾಥಮಿಕ, ಪ್ರೌಢಶಿಕ್ಷಣ

ಹೊಸ ಪದ್ಧತಿ: 10+2 ಬದಲಿಗೆ 5+3+3+4


ರಾಷ್ಟ್ರೀಯ ಶಿಕ್ಷಣ ನೀತಿ-2020 ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಪೂರ್ವ ಶಿಕ್ಷಣ ಪದ್ಧತಿಯನ್ನು ಅಮೂಲಾಗ್ರ ಪರಿಷ್ಕರಿಸಲಿದೆ. ಹೊಸ ನೀತಿಯ ಪ್ರಕಾರ 10 ಪ್ಲಸ್ 2 ಪದ್ಧತಿಯನ್ನು 5+3+3+4 ಆಗಿ ಬದಲಾಯಿಸಲಾಗಿದೆ. ಅಂದರೆ ಮೊದಲ ಐದು ವರ್ಷದ ಶಿಕ್ಷಣವನ್ನು `ಮೂಲಭೂತ ಶಿಕ್ಷಣ' ಹಂತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪೂರ್ವ ಪ್ರಾಥಮಿಕದ ಮೂರು ವರ್ಷ ಹಾಗೂ 1ನೇ ಹಾಗೂ 2ನೇ ತರಗತಿಗಳನ್ನು ಸೇರಿಸಲಾಗಿದೆ. ಮುಂದಿನ ಮೂರು ವರ್ಷ (3ರಿಂದ 5ನೇ ತರಗತಿ) ಗಳು `ಸಿದ್ಧತಾ ಹಂತ'ವಾಗಿದ್ದರೆ, ನಂತರದ 3 ವರ್ಷ (6ರಿಂದ 8ನೇ ತರಗತಿ) `ಮಧ್ಯಮ ಹಂತ'ದ ಶಿಕ್ಷಣವಾಗಿರುತ್ತದೆ. ಕೊನೆಯ ನಾಲ್ಕು ವರ್ಷಗಳು (9ರಿಂದ 12ನೇ ತರಗತಿ) `ಪ್ರೌಢಶಿಕ್ಷಣ ಹಂತವಾಗಿರುತ್ತದೆ. ಇದರೊಂದಿಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಲಾಗಿದೆ. 

ಮೊದಲ 5 ವರ್ಷ - ಮೂಲಭೂತ ಹಂತ

ನಂತರದ 3 ವರ್ಷ - ಸಿದ್ಧತಾ ಹಂತ

ನಂತರದ 3 ವರ್ಷ - ಮಧ್ಯಮ ಹಂತ

ಕೊನೆಯ 5 ವರ್ಷ - ಪ್ರೌಢ ಹಂತ

5ನೇ ತರಗತಿ ತನಕ ಮಾತೃಭಾಷೆಯಲ್ಲಿ ಶಿಕ್ಷಣ

ಸಾಧ್ಯವಿದ್ದಲ್ಲಿ ಕನಿಷ್ಠ 5ನೇ ತರಗತಿಯವರೆಗೂ ಮಾತೃಭಾಷೆ, ಪ್ರಾದೇಶಿಕ ಅಥವಾ ಸ್ಥಳೀಯ ಭಾಷೆಯಲ್ಲೇ ಶಿಕ್ಷಣ ನೀಡಬೇಕು ಮತ್ತು ಅದನ್ನು 8ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ತರಗತಿಯವರೆಗೂ ವಿಸ್ತರಿಸಬಹುದು. ಹಾಗೆಯೇ, `ಭಾರತೀಯ ಭಾಷೆಗಳು', ಫನ್ ಪ್ರಾಜೆಕ್ಟ್ ಅಥವಾ ಚಟುವಟಿಕೆಯನ್ನು ಪ್ರತಿ ವಿದ್ಯಾರ್ಥಿಗೆ ನೀಡಬೇಕು. ತ್ರಿಭಾಷಾ ಸೂತ್ರದಡಿ ಕಲಿಕೆ ಸಾಗಬೇಕು. ಹಾಗೆಯೇ, ಕನ್ನಡವೂ ಸೇರಿದಂತೆ ಎಲ್ಲ ಶಾಸ್ತ್ರೀಯ ಭಾಷೆಗಳು ಲಭ್ಯವಾಗಿರಬೇಕು. 

ಸಮಗ್ರ ಪ್ರಗತಿ ಕಾರ್ಡ್

· ಸ್ವಮೌಲ್ಯಮಾಪನ, ಮಗುವಿನ ಮೌಲ್ಯಮಾಪನ ಮತ್ತು ಶಿಕ್ಷಕರ ಮೌಲ್ಯಮಾಪನವು ಮಕ್ಕಳ ಪ್ರಗತಿ ಕಾರ್ಡ್‍ನಲ್ಲಿ ಅಡಕವಾಗಿರಬೇಕು. 

· ಶಾಲಾ ವರ್ಷಗಳಲ್ಲಿ ಮಕ್ಕಳ ಬೆಳವಣಿಗೆಯ ಟ್ರ್ಯಾಕ್ ದಾಖಲಿಸಲು ಮತ್ತು ಮಕ್ಕಳಿಗೆ ತಮ್ಮ ವೃತ್ತಿ ಆಯ್ಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಸಾಫ್ಟ್‍ವೇರ್ ಅಭಿವೃದ್ಧಿಪಡಿಸಲಾಗುವುದು. 

· ಈ ಸಮಗ್ರ ಪ್ರಗತಿ ಕಾರ್ಡ್ ಪೋಷಕರು ಮತ್ತು ಅವರ ಮಕ್ಕಳ ಶಿಕ್ಷಣ ಅಭಿವೃದ್ಧಿಯ ಅಡಕವಾಗಿರಬೇಕು. 

ಪಠ್ಯದಲ್ಲಿನ ಸ್ಥಳೀಯತೆಗೆ ಅದ್ಯತೆ

· ಎಲ್ಲ ಪಠ್ಯಪುಸ್ತಕಗಳು ಅಗತ್ಯವಾಗಿರುವ ಮುಖ್ಯ ವಿಷಯವನ್ನು ಒಳಗೊಂಡಿರಬೇಕು ಮತ್ತು ಸ್ಥಳೀಯ ಹಾಗೂ ಸಂದರ್ಭದ ಅಗತ್ಯಕ್ಕೆ ಅನುಗುಣವಾಗಿ ಪಠ್ಯವನ್ನು ರೂಪಿಸಬೇಕು. 

· ದೀಕ್ಷಾ ಡಿಜಿಟಲ್ ವೇದಿಕೆ ಉಚಿತ ಆವೃತ್ತಿ ಲಭ್ಯತೆಯೊಂದಿಗೆ ಕೈಗೆಟುಕುವ, ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳನ್ನು ಒದಗಿಸಲಾಗುವುದು. 

ಪ್ರತಿವರ್ಷ ಇಲ್ಲ ಪರೀಕ್ಷೆ

ಹಾಲಿ ವ್ಯವಸ್ಥೆಯಲ್ಲಿ ಪ್ರತಿವರ್ಷ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ನೀತಿಯ ಪ್ರಕಾರ 3,5 ಮತ್ತು 8ನೇ ತರಗತಿಗೆ ಮಾತ್ರ ಪರೀಕ್ಷೆ ಇರಲಿದೆ. ಉಳಿದ ವರ್ಷ ತರಗತಿಗಳ ಮೌಲ್ಯಮಾಪನವು `ನಿಯಮಿತ ಮತ್ತು ರಚನಾತ್ಮಕ' ಶೈಲಿಯದ್ದಾಗಿರುತ್ತದೆ. ಅಂದ್ರ ಸ್ಪರ್ಧಾತ್ಮಕ ಆಧಾರಿತ, ಕಲಿಕಾ ಉತ್ತೇಜನ ಮತ್ತು ಅಭಿವೃದ್ಧಿ, ವಿಶ್ಲೇಷಣೆ, ವಿಮರ್ಶಾತ್ಮಕ ಚಿಂತನೆ ಮತ್ತು ಪರಿಕಲ್ಪನೆಯಂಥ ಸ್ಪಷ್ಟತೆಯನ್ನು ಮೂಡಿಸುವ ಅತ್ಯುತ್ತಮ ಕೌಶಲದ ಶಿಕ್ಷಣವನ್ನು ಇದು ಒದಗಿಸುತ್ತದೆ. 

ತ್ರಿಭಾಷಾ ಸೂತ್ರ, ಸಂಸ್ಕøತಕ್ಕೆ ಆದ್ಯತೆ

ತ್ರಿಭಾಷಾ ಸೂತ್ರದ ಅನ್ವಯ ಶಾಲೆಯಲ್ಲಿ ಶಿಕ್ಷಣ ನೀಡಬೇಕು. ವಿಶೇಷವಾಗಿ ಸಂಸ್ಕøತ ಐಚ್ಛಿಕ ಭಾಷೆಯಾಗಿ ಎಲ್ಲ ಶಾಲೆಗಳಲ್ಲಿ ಲಭ್ಯ ಇರಬೇಕು. ಇದು ಉನ್ನತ ಶಿಕ್ಷಣಕ್ಕೂ ಅನ್ವಯ. ಸಂಸ್ಕøತ ವಿಶ್ವ ವಿದ್ಯಾಲಯಗಳೂ ಸಂಸ್ಕøತಕ್ಕೆ ಮಾತ್ರವೇ ಸೀಮಿತವಾಗದೇ ಬಹುಕೋರ್ಸ್‍ಗಳನ್ನು ಕಲಿಸಬೇಕು. 

ಬೋರ್ಡ್ ಎಕ್ಸಾಮ್ ಪದ್ಧತಿ ಪರಿಷ್ಕರಣೆ

10 ಮತ್ತು 12ನೇ ತರಗತಿಗಳಿಗೆ ಮಾತ್ರ ಬೋರ್ಡ್ ಎಕ್ಸಾಮ್ ಇರುತ್ತದೆ. ಹಾಗೆಯೇ ಈ ಪರೀಕ್ಷೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಸಿಬಿಎಸ್‍ಇಯಲ್ಲಿ ಗಣಿತ ಇರುವಂತೆ ಎಲ್ಲ ಕೋರ್ಸ್‍ಗಳನ್ನು ಎರಡು ಭಾಷೆಗಳಲ್ಲಿ ನೀಡಲಾಗುತ್ತದೆ. ರಾಜ್ಯಗಳಲ್ಲೂ ಬೋರ್ಡ್ ಪರೀಕ್ಷೆಗಳು ಜ್ಞಾನಾಧಾರಿತ ಪರೀಕ್ಷೆಗಳಾಗಿರಲಿವೆ ಹೊರತು ಕಲಿಕೆಯ ಉದ್ದೇಶ ಮಾತ್ರವೇ ಆಗಿರುವುದಿಲ್ಲ. ಪ್ರತಿ ವಿಷಯವೂ ಆಬ್ಜೆಕ್ಟಿವ್ ಮತ್ತು ವಿವರಣಾತ್ಮಕ ಪರೀಕ್ಷೆ ಹೊಂದಿರುತ್ತದೆ. 

6ನೇ ಕ್ಲಾಸ್‍ನಿಂದಲೇ ಕೋಡಿಂಗ್

ಗಣಿತದ ಪರಿಕಲ್ಪನೆಗಳು, ವೈಜ್ಞಾನಿಕ ವಿಚಾರಗಳು ಈ ಶಿಕ್ಷಣದ ಭಾಗವಾಗಿರಲಿವೆ. ಸಹಪಠ್ಯಗಳಾದ ಕ್ರೀಡೆ, ವೃತ್ತಿಪರ, ಕಲೆ, ವಾಣಿಜ್ಯ, ವಿಜ್ಞಾನ ಸೇರಿ ಎಲ್ಲವ ಇದೇ ಹಂತದಲ್ಲಿರಲಿವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆಗನುಸಾರವಾಗಿ ವಿಷಯಗಳನ್ನು ತೆಗೆದುಕೊಳ್ಳಬಹುದು. ಹಾಗೆಯೇ 6ನೇ ತರಗತಿಯಿಂದಲೇ ಕೋಡಿಂಗ್ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. 

ಲೋಕವಿದ್ಯಾ

ಭಾರತದಲ್ಲಿ ಲೋಕವಿದ್ಯಾ ಜ್ಞಾನ ಅಭಿವೃದ್ಧಿಪಡಿಸಿ ಎಲ್ಲ ವಿದ್ಯಾರ್ಥಿಗಳಿಗೂ ಲಭ್ಯವಾಗುವಂತೆ ಮಾಡಲಾಗುವುದು. 

ವೃತ್ತಿಪರ ವಿಷಯ ಕೌಶಲ

6 ರಿಂದ 8ನೇ ತರಗತಿಯ ಎಲ್ಲ ಮಕ್ಕಳಿಗೆ ಸ್ಥಳೀಯ ವೃತ್ತಿಪರ ಕೌಶಲದ ಜ್ಞಾನ ನೀಡಲಾಗುವುದು. ಅಂದರೆ ಬಡಿಗ, ಮಾಲಿ, ಕುಂಬಾರ ಕಲಾವಿದ ಇತ್ಯಾದಿ ಕೌಶಲಗಳನ್ನು ಅಭಿವೃದ್ಧಿಪಡಿಸಲಾಗಿದೆ. 

ಹೊಸ ನೀತಿ ಅನುಷ್ಠಾನ ಯಾವಾಗ

2021-22

· ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ನಿರ್ಮಾಣ (ಎನ್‍ಎಸ್‍ಎಫ್‍ಎಸ್‍ಇ)

· ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ವಿನ್ಯಾಸ

2022-23

· ಶಿಕ್ಷಕರಿಗೆ ರಾಷ್ಟ್ರೀಯ ವೃತ್ತಿಪರ ಗುಣಮಟ್ಟದ ಸಾಮಾನ್ಯ ಮಾರ್ಗದರ್ಶಿ ಸೂತ್ರ ಜಾರಿ (ಎನ್‍ಪಿಎಸ್‍ಟಿ)

2025-26

· ಶಾಲೆಗಳಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ಕನಿಷ್ಠ ಶೇ. 50 ರಷ್ಟು ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣಕ್ಕೆ ತೆರೆದುಕೊಳ್ಳಬೇಕು. 

· 3ನೇ ತರಗತಿಯಿಂದ ಎಲ್ಲ ಕಲಿಯುವವರಿಗೆ ಪ್ರಾಥಮಿಕ ಶಾಲೆಗಳಲ್ಲಿ ಸಾರ್ವತ್ರಿಕ ಅಡಿಪಾಯದ ಸಾಕ್ಷರತೆಯನ್ನು ಸಾಧಿಸುವುದು. 

2029-30

· ಕನಿಷ್ಠ ಪದವಿ ಅರ್ಹತೆಯೊಂದಿಗೆ ಶಿಕ್ಷಕರ ಶಿಕ್ಷಣವನ್ನು ನಿಧಾನವಾಗಿ ಬಹುವಿಷಯ ಕಲಿಕೆಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಮಾರ್ಪಡಿಸಲಾಗುವುದು. 

· ಎಲ್ಲ ಟೀಚರ್ ಎಜುಕೇಷನ್ ಇನ್ಸ್‍ಟಿಟ್ಯೂಷನ್‍ಗಳನ್ನು ಬಹುವಿಷಯ ಕಲಿಕೆಯ ಸಂಸ್ಥೆಗಳಾಗಿ ಬದಲಿಸಲಾಗುವುದು. 

2040

· ಹೊಸ ಶಿಕ್ಷಣ ನೀತಿಯ ಪೂರ್ಣ ಅನುಷ್ಠಾನ ಮತ್ತು ಜಾರಿಗೊಳಿಸಲಾದ ನೀತಿಯ ಸಮಗ್ರ ವಿಮರ್ಶಾತ್ಮಕ ಅಧ್ಯಯನ. 

 ಭಾರತ ಸರ್ಕಾರದ ಉನ್ನತ ಶಿಕ್ಷಣದಲ್ಲಿ ಭಾರಿ ಬದಲಾವಣೆ

ಡ್ರಾಪೌಟ್ ಆದ್ರೂ ಸಿಗುತ್ತೆ ಸರ್ಟಿಫಿಕೇಟ್

ಹೊಸ ಶಿಕ್ಷಣ ನೀತಿಯಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವು ವಿಲೀನವಾಗಲಿದ್ದು ಶಿಕ್ಷಣವು 3 ಅಥವಾ ವರ್ಷಗಳ ಅವಧಿಯದ್ದಾಗಿರುತ್ತದೆ. ಇಲ್ಲಿ ವಿದ್ಯಾರ್ಥಿಗಳು ಪೂರ್ಣ ಕೋರ್ಸ್ ಮುಗಿಸದೆ ಮಧ್ಯದಲ್ಲಿ ಕೋರ್ಸ್‍ನಿಂದ ನಿರ್ಗಮಿಸಬಹುದು. ಆದರೆ ಇದನ್ನು ಕೋರ್ಸ್ ಅಪೂರ್ಣ ಎಂದು ಪರಿಗಣಿಸುವುದಿಲ್ಲ. 1 ವರ್ಷ ಪೂರೈಸಿದ ಬಳಿಕ ವೃತ್ತಿಪರ ಶಿಕ್ಷಣ ಸೇರಿದಂತೆ ಅವರು ಆಯ್ಕೆ ಮಾಡಿಕೊಂಡಿದ್ದ ವಿಷಯದಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ. ವಿದ್ಯಾರ್ಥಿ 2 ವರ್ಷ ಪೂರೈಸಿದರೆ ಡಿಪ್ಲೊಮಾ ಪ್ರಮಾಣ ಪತ್ರ ದೊರೆಯಲಿದೆ. 3 ವರ್ಷ ಪೂರೈಸಿದರೆ ಪದವಿ ಪ್ರಮಾಣ ಪತ್ರ ದೊರೆಯಲಿದೆ. ವಿದ್ಯಾರ್ಥಿಯು ಐಚ್ಛಿಕವಾಗಿ 4 ವರ್ಷದ ಡಿಗ್ರಿಯನ್ನು ಆಯ್ದುಕೊಳ್ಳಬಹುದು. 

ಶೈಕ್ಷಣಿಕ ಕ್ರೆಡಿಟ್ ಬ್ಯಾಂಕ್ ಸ್ಥಾಪನೆ

ಹೊಸ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅವರು ಗಳಿಸಿದ ಕ್ರೆಡಿಟ್‍ಗಳ ಮೂಲಕ ಅಳೆಯಲಾಗುತ್ತದೆ. ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಕ್ರೆಡಿಟ್‍ಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು `ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್' (ಎಬಿಸಿ) ಸ್ಥಾಪನೆಯಾಗಲಿದೆ. ಇದರಲ್ಲಿ ಸಂಗ್ರಹವಾದ ಕ್ರೆಡಿಟ್ ಸ್ಕೋರ್‍ಗಳನ್ನು ಬೇರೊಂದು ವಿಷಯದಲ್ಲಿ ಗಳಿಸಿದ ಸ್ಕೋರ್ ಜೊತೆ ಸೇರಿಸಲು ಅಥವಾ ಬೇರೊಂದು ವಿಷಯಕ್ಕೆ ವರ್ಗಾವಣೆ ಮಾಡಲು ಸಾಧ್ಯವಿದ್ದು ಅಂತಿಮ ವರ್ಷದ ಡಿಗ್ರಿಗೆ ಅವುಗಳನ್ನು ಒಟ್ಟಾರೆಯಾಗಿ ಪರಿಗಣಿಸಲಾಗುವುದು.

ಎಂಫಿಲ್‍ಗೆ ತಿಲಾಂಜಲಿ

ಇನ್ನು ಮುಂದೆ ಎಂಫಿಲ್ ರದ್ದಾಗಲಿದೆ. ಪದವಿ ಪೂರ್ವ ಶಿಕ್ಷಣ 3 ಅಥವಾ ನಾಲ್ಕು ವರ್ಷಗಳು ಇರಲಿದ್ದು, 1 ಅಥವಾ 2 ವರ್ಷಗಳ ಸ್ನಾತಕೋತ್ತರ ಪದವಿ ಇರಲಿದೆ. ಏಕೀಕೃತ 5 ವರ್ಷದ ಬ್ಯಾಚಲರ್/ ಮಾಸ್ಟರ್ ಡಿಗ್ರಿ ಆಯ್ಕೆಯೂ ಲಭ್ಯವಾಗಲಿದೆ. 

ಜಿಲ್ಲೆಗೊಂದು ಬಹುವಿಷಯ ಕಾಲೇಜು

2030 ರ ವೇಳೆಗೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ದೊಡ್ಡಮಟ್ಟದ ಬಹು-ವಿಷಯಗಳ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. 2040ರ ವೇಳೆಗೆ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹು-ವಿಷಯಗಳ ಶಿಕ್ಷಣ ಸಂಸ್ಥೆಗಳಾಗಿ ಮಾರ್ಪಡಿಸಿ, ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 3000 ವಿದ್ಯಾರ್ಥಿಗಳನ್ನು ಹೊಂದಿರುವಂತೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. 

ಕೇಂದ್ರೀಯ ನಿಯಂತ್ರಕ ವ್ಯವಸ್ಥೆ

ಎಲ್ಲಾ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು ನಿಯಂತ್ರಿಸಲು ಯುಜಿಸಿ ಮಾದರಿಯಲ್ಲಿ `ಭಾರತೀಯ ಉನ್ನತ ಶಿಕ್ಷಣ ಮಂಡಳಿ' (ಎಚ್‍ಇಸಿಐ) ಸ್ಥಾಪನೆಯಾಗಲಿದೆ. ಶಿಕ್ಷಕರ ತರಬೇತಿ ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣಕ್ಕೆ ಇದು ಏಕ ಗವಾಕ್ಷಿ ನಿಯಂತ್ರಣ ಪ್ರಾಧಿಕಾರವಾಗಿರುತ್ತದೆ. 

ಸಾಮಾನ್ಯ ಪ್ರವೇಶ ಪರೀಕ್ಷೆ 

ಎಲ್ಲಾ ವಿವಿಗಳಲ್ಲಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‍ಟಿಇ) ಏಕರೀತಿಯ ಸಾಮಾನ್ಯ ಪರೀಕ್ಷೆಯನ್ನು ನಡೆಸಲಿದೆ. ಆದರೆ ಆಯಾ ವಿಷಯಗಳಿಗೆ ತಕ್ಕಂತ ವಿಭಿನ್ನ ಪ್ರಶ್ನೆಪತ್ರಿಕೆಗಳನ್ನು ಒದಗಿಸಲಿದೆ. 

ಇನ್ನು ಆಟ್ರ್ಸ್, ಕಾಮರ್ಸ್, ಸೈನ್ಸ್ ಮಧ್ಯೆ ಗೋಡೆ ಇಲ್ಲ

ಹೊಸ ಶಿಕ್ಷಣ ನೀತಿಯು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಒತ್ತು ನೀಡುವುದಲ್ಲದೆ, ಯಾವುದೇ ವಿದ್ಯಾರ್ಥಿ ತನ್ನ ಶೈಕ್ಷಣಿಕ ಹಿನ್ನೆಲೆಯನ್ನು ಲೆಕ್ಕಿಸದೆ ಯಾವುದೇ ವಿಷಯವನ್ನು ಓದಲು ಅವಕಾಶ ನೀಡುತ್ತದೆ. ಅಂದರೆ ಎಂಜಿನಿಯರಿಂಗ್ ವಿದ್ಯಾರ್ಥಿಯು ಇತಿಹಾಸ ಓದಬಹುದು. ಕಲಾ ವಿಭಾಗದ ವಿದ್ಯಾರ್ಥಿಯು ಭೌತಶಾಸ್ತ್ರ ಅಥವಾ ಗಣಿತವನ್ನು ಒಂದು ವಿಷಯವಾಗಿ ಆಯ್ದುಕೊಳ್ಳಬಹುದು. 

ಬಹು ವಿಷಯಗಳ ಶಿಕ್ಷಣಕ್ಕೆ ಆದ್ಯತೆ

ಪ್ರಸ್ತುತ ಒಂದೇ ವಿಷಯದಲ್ಲಿ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಸಂಸ್ಥೆಗಳು (ಉದಾ: ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ವಿವಿಗಳು) ಇನ್ನು ಮುಂದೆ ಇರುವುದಿಲ್ಲ. ಇವು ಸಹ ಬಹುವಿಷಯಗಳ ಶಿಕ್ಷಣ ಸಂಸ್ಥೆಗಳಾಗಿ ಮಾರ್ಪಡಾಗಲಿವೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಗಳು 2030ರ ವೇಳೆಗೆ ಬಹುವಿಷಯಗಳ ಶೈಕ್ಷಣಿಕ ಸಂಸ್ಥೆಗಳಾಗಿ ಬದಲಾಗಬೇಕೆಂಬ ಗುರಿಯನ್ನು ನೀಡಲಾಗಿದೆ. 

· ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಕಲೆ, ಸಂಗೀತ, ನೃತ್ಯ, ಸಾಹಿತ್ಯ ಸೇರಿ ಬಹುವಿಷಯಗಳ ಬೋಧನೆ.

· ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಲು 100 ವಿದೇಶಿ ಕಾಲೇಜುಗಳಿಗೆ ಅನುಮತಿ.

· 2035ರ ವೇಳೆಗೆ 50% ಸರಾಸರಿ ದಾಖಲಾತಿ ಅನುಪಾತ.

· ಸಂಶೋಧನೆಗೆ ಆದ್ಯತೆ ನೀಡಲು ಉನ್ನತ ಶಿಕ್ಷಣ ಸಂಸ್ಥೆಗಳ ಮರುವರ್ಗೀಕರಣ. 

ಶಿಕ್ಷಣ ನೀತಿಯ ತಿರುಳು

· ತಂತ್ರಜ್ಞಾನ ಕೇಂದ್ರಿತ ಶಿಕ್ಷಣ ವ್ಯವಸ್ಥೆ

· 12ನೇ ಕ್ಲಾಸ್‍ವರೆಗೂ ಕಡ್ಡಾಯ, ಉಚಿತ ಶಿಕ್ಷಣ, ಉನ್ನತ ಶಿಕ್ಷಣ ವ್ಯವಸ್ಥೆ ನಿಯಂತ್ರಣಕ್ಕೆ ಪ್ರಾಧಿಕಾರ

· ಶಾಲಾ ಶುಲ್ಕಕ್ಕೆ ಗರಿಷ್ಠ ಮಿತಿ ನಿಗದಿ

· ಆಟ್ರ್ಸ್‍ನಲ್ಲೂ ಸೈನ್ಸ್, ವಿಜ್ಞಾನದಲ್ಲೂ ಕಲೆ

ಗುಣಮಟ್ಟದ ನಿಯಂತ್ರಣಕ್ಕೆ ಆದ್ಯತೆ

· ಹೊಸ ಶಿಕ್ಷಣ ನೀತಿಗಾಗಿ ಶಾಲೆಗಳ ಗುಣಮಟ್ಟವನ್ನೂ ಎತ್ತರಿಸಬೇಕಾಗಿದೆ. ಖಾಸಗಿ ಶಾಲೆಗಳ ಗುಣಮಟ್ಟಕ್ಕೂ ಮಾನದಂಡಗಳು ನಿಗದಿಯಾಗಲಿವೆ. ಇದರ ಮೇಲೆ ನಿಗಾ ಇಡಲು ಪ್ರಾಧಿಕಾರದ ರಚನೆಯಾಗಲಿದೆ. 

· ಎಲ್ಲ ಶಾಲೆಗಳು ಕನಿಷ್ಠ ವೃತ್ತಿಪರ ಮತ್ತು ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲೇಬೇಕು. ಕೇಂದ್ರೀಯ ವಿದ್ಯಾಲಯಗಳನ್ನು ಹೊರತುಪಡಿಸಿ ಎಲ್ಲ ಖಾಸಗಿ ಮತ್ತು ಸರಕಾರಿ ಶಾಲೆಗಳ ಗುಣಮಟ್ಟ ಆಗಾಗ ಪರಿಶೀಲನೆ. 

· ದಾನಿಗಳು ಶಾಲೆ ನಡೆಸುವುದಿದ್ದರೆ ಬೆಂಬಲ ನೀಡಲಾಗುತ್ತದೆ. 

ನಮ್ಮ ಭಾರತೀಯ ಪ್ರಾಚೀನ ಶಿಕ್ಷಣ ಪದ್ಧತಿಯಲ್ಲಿ ಮನುಷ್ಯನ ಬೌದ್ಧಿಕ ಮತ್ತು ವ್ಯಕ್ತಿತ್ವ ವಿಕಸನ, ಸ್ವಯಂ ನಿಯಂತ್ರಣ, ಸಾಮಾಜಿಕ ಕಳಕಳಿ, ಸಂಸ್ಕøತಿಯ ಅರಿವು, ಜ್ಞಾನ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುವುದು ಹೇಗೆ ಎಂಬಿತ್ಯಾದಿ ವಿಚಾರಗಳೇ ಮಹತ್ವದ್ದಾಗಿದ್ದವು. ಬ್ರಿಟಿಷರಿಗೆ ನಮ್ಮ ದೇಶವನ್ನು ಒಡೆದು ದುರ್ಬಲಗೊಳಿಸಲು ಎದುರಿಗೆ ಕಂಡ ಮೊದಲ ಎರಡು ವಿಚಾರಗಳೇ ಶಿಕ್ಷಣ ಮತ್ತು ಧಾರ್ಮಿಕ ಅನ್ಯೋನ್ಯತೆ. 

ಬದಲಾವಣೆಯ ಶಿಕ್ಷಣ ನೀತಿ ಜಾರಿಯಾದದ್ದು ಕೇವಲ ಮೂರು ಬಾರಿ. ಶಿಕ್ಷಣದ ಮಟ್ಟಿಗೆ ನಾವೇಕೆ ಅಷ್ಟು ಅಸಡ್ಡೆ ತೋರಿಬಿಟ್ಟವೋ ಗೊತ್ತಿಲ್ಲ. ಆಳಿದ ಸರಕಾರಗಳೇ ಕಾರಣವಾದರೂ ಅವುಗಳನ್ನಷ್ಟೇ ಬಯ್ಯುವುದು ಉದ್ದೇಶವೇ ಅಲ್ಲ. ಆದದ್ದು ಆಗಿ ಹೋಯಿತು. ಮುಂದಾದರೂ ಸರಿ ಮಾಡಿಕೊಳ್ಳೋಣ ಎನ್ನುವ ಇರಾದೆ ಬೇಕಷ್ಟೆ. 

ಆರ್.ಟಿ.ಇ 2009 ರಡಿಯಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಶಿಕ್ಷಣ ಪಡೆಯುವ ಹಕ್ಕು ಕಾಯ್ದೆಯಲ್ಲಿ ಹಲವಾರು ಲೋಪಗಳು, ಯಡವಟ್ಟುಗಳಿವೆ. ಇದರಲ್ಲಿ ಸುಧಾರಣೆ ತರುವ ಕೆಲವು ಅಂಶಗಳು ಮೋದಿ ಸರಕಾರದ ಉದ್ದೇಶ ಎನ್ನುವುದು ಕರಡು ಪ್ರತಿಯಲ್ಲಿ ನಮೂದಾಗಿದೆ. ಆದರೆ ಅದರಲ್ಲಿರುವ ಬಹುದೊಡ್ಡ ಲೋಪವೆಂದರೆ ಆರ್.ಟಿ.ಇ ಮೈನಾರಿಟಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಲಾಗುವಾಗದೆ ಇರುವುದು. ಸುಪ್ರೀಂಕೋರ್ಟ್‍ನ ತೀರ್ಪಿನಿಂದ ಅಲ್ಪಸಂಖ್ಯಾತ ಬಹುತೇಕ ಶ್ರೀಮಂತ ಶಿಕ್ಷಣ ಸಂಸ್ಥೆಗಳಿಗೆ ಈ ಮಹತ್ ಕಾರ್ಯದಿಂದ ನುಣುಚಿಕೊಳ್ಳಲು ಸಾಧ್ಯವಾಗಿದೆ. ಅದರ ಬದಲಿಗೆ ಶಿಕ್ಷಣ ಸಂಸ್ಥೆಯು ಆರ್.ಟಿ.ಇ ಲಾಗುವಾಗುವ ಕಾನೂನು ತರಬೇಕು. ಇದರಿಂದ ಆರ್.ಟಿ.ಇ ಇನ್ನಷ್ಟು ಸಾಫಲ್ಯಗೊಳ್ಳುವಂತಾಗುತ್ತದೆ. 

ಶಿಕ್ಷಣ ಸಂಸ್ಥೆಗಳ `ಶಿಸ್ತಿನ ಸಂಸ್ಥೆ'ಗಳಾಗಿಸಲಿದೆ ನವನೀತಿ

ಹೊಸ ಶಿಕ್ಷಣ ಪದ್ಧತಿಯಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್‍ಸಿ ಬದಲಾಗಿ ಬಿ.ಎಲ್.ಎ ಪದವಿ ನೀಡಲಾಗುವುದು. 6ನೇ ಇಯತ್ತೆಯಿಂದ ವೃತ್ತಿಪರ ಕೋರ್ಸ್‍ಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ವಿವಿಧ ಭಾಷೆಗಳು, ಸಂಗೀತ, ತತ್ವಶಾಸ್ತ್ರ, ಕಲೆ, ನೃತ್ಯ, ರಂಗಭೂಮಿ, ಶಿಕ್ಷಣ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕ್ರೀಡೆ, ಅನುವಾದ, ವ್ಯಾಖ್ಯಾನ ಮುಂತಾದ ವಿಷಯಗಳನ್ನು ಅಳವಡಿಸಿರುವುದು ಸ್ವಾಗತಾರ್ಹ ಸಂಗತಿ. 

ಬಡ ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಠಿಯಿಂದ ಪದವಿ ವ್ಯಾಸಂಗ ಮಾಡುವವರಿಗೆ ಶೈಕ್ಷಣಿಕ ಸಾಲದ ವ್ಯವಸ್ಥೆಯನ್ನು ಮಾಡಿರುವುದು ತುಂಬಾ ಅನುಕೂಲಕರ. ಇನ್ನು 2025 ರ ಹೊತ್ತಿಗೆ ಶಾಲೆ ಕಾಲೇಜುಗಳಲ್ಲಿ ಕಲಿಯುವ ಶೇ. 50 ರಷ್ಟು ವಿದ್ಯಾರ್ಥಿ ವೃಂದ ವೃತ್ತಿಪರ ಶಿಕ್ಷಣಕ್ಕೆ ಹೊಂದಿಕೊಳ್ಳುವರೆಂಬ ಭರವಸೆಯನ್ನು ಇರಿಸಕೊಳ್ಳಲಾಗಿದೆ. ಶಿಕ್ಷಣ ನೀತಿಯು 2030ರ ನಂತರ ಜಿಲ್ಲೆಗೊಂದರಂತೆ ಬಹು ಶಿಸ್ತಿನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವ ಉದ್ದೇಶ ಹೊಂದಿದೆ. ಎಲ್ಲಾ ಕಾಲೇಜುಗಳಿಗೂ ಒಂದೇ ತರಹದ ಮೌಲ್ಯಾಂಕನ ನೀಡಿ ಶ್ರೇಣಿ ನೀಡಲಾಗುವುದು. 

ಮೂರು ವರ್ಷಗಳಿಂದ 6 ರವರೆಗೆ ಕಲಿಸುವ ಸಲುವಾಗಿ ಮನೆಯೇ ಮೊದಲು ಪಾಠಶಾಲೆ ಪೋಷಕರ ಮೊದಲ ಗುರು ಎಂಬ ಸತ್ಯಕ್ಕೆ ಈ ಸಂಗತಿ ಬಹಳ ಬಲ ತುಂಬಲಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿ ಮತ್ತು ಕಲಿಯುವ ಹುಮ್ಮಸ್ಸು ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ. ಮುಂಜಾವಿನ ಟಿಫನ್ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ಅದರಿಂದಾಗಿ ಶಾಲೆಗೆ ವಿಳಂಬವಾಗಿ ತಲುಪುವ ಪ್ರಮೇಯ ತಪ್ಪುವುದು. ವಿದೇಶದಲ್ಲಿ ಸಿಗುವಂಥ ಗುಣಮಟ್ಟದ ಶಿಕ್ಷಣವನ್ನು ನಮ್ಮಲ್ಲಿಯೇ ಒದಗಿಸುವುದು.

Post a Comment

0Comments

Post a Comment (0)